Wednesday, November 25, 2009

ನೆನಪಿನ ದೋಣಿಯಲಿ ನಾನು...

ನೆನಪು ಯಾರಿಗೆ ಬೇಡ ಹೇಳಿ ನೆನಪು ಕಹಿ ಇರಲಿ ಸಿಹಿ ಇರಲಿ ನೆನಪುಗಳಿಲ್ಲದೇ ಇರಲು ಸಾಧ್ಯವಿಲ್ಲ.
ನೆನಪಿನ ಬುತ್ತಿಯ ಗಂಟು ಬಿಚ್ಚಿದ್ದೇನೆ ಸವಿಯನ್ನು ನಿಮಗೂ ಉಣಬಡಿಸುವ ಆಸೆ ಇದೆ
ಬುತ್ತಿ ರುಚಿಯಾಗಿದೆ ತಯಾರಿಸಿದವರು ಬಹಳಷ್ಟು ಜನ ನನ್ನ ಜೊತೆ ದೋಣಿ ಏರಿಲ್ಲ ಅವರ ದಡ ಸ್ವಲ್ಪ ಲಗೂನೆ ಬಂದಿದೆ
ಇಳಿದುಕೊಂಡಿದ್ದಾರೆ....!
ಆದರೂ ಅವರೊಡನೆ ಕಳೆದ ಸುಖ ದುಃಖದ ಕ್ಷಣ ನಿಮ್ಮೊಂದಿಗೆ ಹಂಚಿಕೊಳ್ಳುವವನಿದ್ದೇನೆ.
ಬುತ್ತಿರುಚಿಯಾಗಿದ್ದರೆ ಮನದಣಿಯೆ ಸವಿಯಿರಿ ಕಹಿ ಅನಿಸಿದಾಗೆಲ್ಲ ಉಗಿಯಿರಿ..!
ಬರ್ರಿ ದೋಣಿ ಏರೋಣ....

. ಸುರು ಮಾಡೋದು ಅವಳಿಂದಲೇ ಅದು ನ್ಯಾಯವೂ ಹೌದು ಅವಳಿಲ್ಲದಿದ್ದರೆ ನಾ ಎಲ್ಲಿ ಇರತಿದ್ದೆ..
ಅವ್ವ ಈಗಿಲ್ಲ ೧೩ ವರ್ಷ ಆದವು ಫೋಟೋದಲ್ಲಿ ಕೈದ ಆಗಿ, ನೆನಪು ಬರ್ತದ ಕಣ್ಣೂ ಹನಿಗೂಡ್ತದ
ಏನು ಮಾಡಲಿ... ಅವಳಬಗ್ಗೆ ಹೇಳಲು ಹೊರಟಿರುವೆ ಕಷ್ಟ ಅದ ಆದ್ರೂ ಕವಿತಾದಾಗ ಹಿಡಿದಿಡಲಿಕ್ಕೆ ಪ್ರಯತ್ನ ಮಾಡೇನಿ....

ನನ್ನವ್ವ
------
ಹಾಳೆಗಳ ಮೇಲೆ ಭಾವ ಮೂಡಿದರೆ
ಬರೆದೇನು ಕವಿತೆ..
ಹಿಡಿದಿಡಬಹುದಾದರೆ ಕೆತ್ತನೆಯಲಿ
ಕೆತ್ತೇನು ಅವಳ...
ಅವ್ವ ಅಮೂರ್ತ ರೂಪಿ
ಶಿಲ್ಪಿ ಕವಿಗಳಿಗೆ ನಿಲುಕದ ಕನಸವಳು....!

ಜಗದಲ್ಲಿ ವಿರಳವಾದ ಅಂತಃಕರಣವ
ಜೀವನವಿಡೀ ಉಣ್ಣಿಸಿದಳು
ತಾ ಬೆಂದರೂ ಶಾಖ ಬೇರೆಯವರಿಗೆ
ತಟ್ಟಗೊಡದವಳು...
ನಾನೇ ಹಲವುಬಾರಿ ಕೊಳ್ಳಿ ಇಟ್ಟರೂ
ಸ್ಥಿತಪ್ರಜ್ನೆ ಅವಳು...!

ಅದೇ ಅರಳಿದ ಹೂ ಮೇಲಿನ ಇಬ್ಬನಿ ಹನಿಯವಳು
ರಾತ್ರಿ ಸುರಿಯುವ ತಂಗಾಳಿಯಂತೆ
ದಿಗಿಲಾಗಿ ನಾ ಅತ್ತಾಗ ಕಣ್ಣೀರಂತೆ ಸುಂದರಿಅವಳು
ಹೀಗಿದ್ದಳು ನನ್ನವ್ವ
ಸುಂದರ ಕನಸಂತೆ...
ನೋಡಿದರೆ ಕೈ ಮುಗಿಯುವ ಉತ್ಕಟತೆಯಂತೆ...!