Sunday, December 13, 2009

ಹಣಮುಕಾಕಾ...

ಬಾಲ್ಯದ ನೆನಪು ಕೆದಕಿದಾಗಲೆಲ್ಲ ಹಣಮುಕಾಕಾನ ಹೆಸರು ಮತ್ತೆ ಮತ್ತೆ ಕಾಡುತ್ತದೆ. ಅವು
ಒಂಥರಾ ಮಧುರ ದಿನಗಳು. ಆ ದಿನಗಳಲ್ಲಿ ನೋವಿರಲಿಲ್ಲ ಗೊಂದಲವಿರಲಿಲ್ಲ ಹಣಮುಕಾಕಾನ ಸಂಗ ಹಾಲಿಗೆ ಸಕ್ಕರೆ ಬೆರೆಸಿದ
ಹಾಗಿತ್ತು. ನನ್ನ ತಂದೆಗೆ ೪ ಅಣ್ಣಂದಿರು,ಒಬ್ಬನೇ ತಮ್ಮ.ಎಲ್ಲರಿಗಿಂತ ಸಣ್ಣವ ಎಂದು ಹಣಮುಕಾಕಾನಿಗೆ ವಿಶೇಷ ಅಕ್ಕರೆ ಸಿಕ್ಕಿರಲಿಲ್ಲ
ಹಾಗೆ ನೋಡಿದರೆ ಅಚ್ಛಾ ಇದು ದೇಸಾಯರ ಮನಿತನದಾಗ ಇರಲೇ ಇಲ್ಲ. ಹಣಮುಕಾಕಾನಲ್ಲಿ ನಮಗೆ ವಿಶೇಷ ಸಲಿಗೆ
ನನ್ನ ತಂದೆ ಕಂಡರೆ ನನಗೊಂಥರಾ ಹಿಂಜರಿತವಿತ್ತು.ಆದರೆ ಕಾಕಾನ ಜತೆ ಮಾತ್ರ ಅಗದಿ ನಿರಾಳ. ಅವನ ಮಾತು, ಅವಮಾಡೂ
ಚಾಷ್ಟಿ, ಅವ ಹೇಳಿದ ಅವನೇ ಸೃಷ್ಟಿಸಿದ ಕತೆಗಳು ಈಗಲೂ ಎಲ್ಲ ನೆನಪಾದರೆ ಮನಸ್ಸು ಉಲ್ಲಸಿತವಾಗುತ್ತದೆ.

ಸಂಜಿ ಐದು ಹೊಡೆಯಿತೆಂದರೆ ಬಕೇಟ್ ನಲ್ಲಿ ನೀರು ತುಂಬಿ ಎರಡೂ ಅಂಗಳಗಳಿಗೆ
ಹಣಮುಕಾಕಾ ಥಳಿ ಹೊಡೆಯಿತ್ತಿದ್ದ ಮಧ್ಯೆ ಮಧ್ಯೆ ನಾವು ಮುದ್ದಾಮ್ ಅಡ್ಡಾಡಬೇಕು.ಇದಕ್ಕೆ ಕಾಯುತ್ತಿದ್ದ ಎಂಬಂತೆ ಅವ ನೀರು
ನಮಗೆ ಉಗ್ಗಬೇಕು ಯೋಯಿಸಿಕೊಂಡಾಗ ಉಳಿದವರು ನಕ್ಕರೂ ಒದ್ದೆ ಆದ ಖುಷಿಗೆ ನಾವು ಕುಣಿಯಬೇಕು. ನಮ್ಮೊಡನೆ ಮಕ್ಕಳಾಗಿ ಅವನೂ ನಲಿಯಬೇಕು. ಹಣಮುಕಾಕಾ ತನ್ನ "ವಾಕಿಂಗ್" ಮುಗಿಸಿ ಮನೆಗೆ ಸುಮಾರು ಆರೂವರೆಗೆ ಬರುತ್ತಿದ್ದ. ಅವ
ಫ್ರೆಶ್ ಆಗಿ ಬರೋದರೊಳಗೆ ಅಂಗಳದಲ್ಲಿ ಚಾಪೆ ಹಾಸಿ, ಟಕ್ಕೆ ಇಟ್ಟು ಒಂಥರಾ ಮೆಹಫಿಲ್ ತಯಾರುಮಾಡುತ್ತಿದ್ದೆವು.ಹೌದು ಅದೊಂದು ಮೆಹಫಿಲ್ಲೆ ಸರಿ.... ಅಂಗಳದ ತುಂಬ ತಂಗಾಳಿ ,ಟಕ್ಕೆಗೆ ಆಸೀನನಾಗಿ ಕುಳಿತ ಹಣಮುಕಾಕಾ ಅವನ ಎದಿ ಕೂದಲದಾಗ ಕೈ ಆಡಿಸಿಕೋತ ಕೂತ ನಾವು. ಹಾಂ ಮೆಹಫಿಲ್ ಗೆ ಒಂದು ಖಾಸ್ ಆಕರ್ಷಣಾನೂ ಇತ್ತು ಅದೇ ಕಾಂಚನಳ
ಹಾಡು. ಕಾಂಚನ ನಮ್ಮದೇ ಓಣಿಯಲ್ಲಿ ವಾಸವಾಗಿದ್ದಳು. ಅವಳ ದನಿ ಚೆನ್ನಾಗಿತ್ತು. ಹಣಮುಕಾಕಾನ ಫೆವರೀಟ್ ಹಾಡು
"ಯೋಗಿ ಮನೆಗೆ ಬಂದ.." ಇದು "ಜ್ಯೋತಿ ಕಲಶ ಛಲಕೆ" ಧಾಟಿ ಹೊಂದಿದ್ದು. ಸ್ವತಃ ಹಣಮುಕಾಕಾ ಹಾಡುತ್ತಿರಲಿಲ್ಲವಾದರೂ
ಅನೇಕ ಮರಾಠಿ ಅಭಂಗಗಳು, ನಾಟ್ಯ ಗೀತೆಗಳು ಅವನ ಆಸಕ್ತಿವಿಷಯಗಳಾಗಿದ್ದವು. ನನ್ನ ತಂದೆ ಸಂಗೀತದ ವಿಷಯದಲ್ಲಿ
ಔರಂಗಜೇಬನೇ ಸರಿ. ಆದರೆ ನನಗೆ ಈ ಹಾಡು,ಸಂಗೀತ ದಲ್ಲಿ ಆಸಕ್ತಿಹುಟ್ಟಲು ಹಣಮುಕಾಕಾನ ಜೊತೆಗಿನ ಒಡನಾಟವೂ ಕಾರ‍ಣ.ಅವನ ಮನೆಯಲ್ಲಿನ ರೇಡಿಯೋದಲ್ಲಿ ಸದಾ ಸಾಂಗಲಿ ಸ್ಟೇಶನ್ ತಪ್ಪಿದರೆ ಸಿಲೋನ್ ರೇಡಿಯೋ. ನೋಡಲಿಕ್ಕೂ
ಹಣಮುಕಾಕಾ ಸುಂದರ. ಹರೇ ಇದ್ದಾಗ ಮನ್ಮಥ ಇದ್ದ ಹಾಗಿರಬೇಕು.

ಅವನ ಇನ್ನೊಂದು ವಿಶೇಷ ಗುಣ ಅಂದ್ರ ಮಂದಿಗೆ ಚಾಷ್ಟಿಮಾಡೂದು.ನಮ್ಮ ಎಲ್ಲಾ
ಹುಡುಗರಿಗೂ ಒಂದೊಂದು ಅಡ್ದಹೆಸರಿಟ್ಟಿದ್ದ. ನನಗ ಅವನ ಕಡಿಂದ ಹ್ಯಾಟ್ಯಾ ಅನ್ನೋ ಬಿರುದು ಸಿಕ್ಕಿತ್ತು. ಹಣಮುಕಾಕಾ ಉತ್ಸಾಹಿ ಪುರುಷ. ನಮಗೆಲ್ಲ ಮಗ್ಗಿ, ಲೆಕ್ಕ ಹಿಂಗೆ ಅವಾಗಾವಾಗ ಪರೀಕ್ಷಾನೂ ತಗೊತಿದ್ದ.ಅದ್ರ ಅವ ಹೇಳೂ ಕಥಿ ಅವನ
ಮೇನ್ ಅಟ್ರಾಕ್ಷನ್. ಅವು ಏನೂ ನೀತಿಬೊಧಕ ಕತಿ ಅಲ್ಲ ಹಂಗಂತ ಅವುಗಳ ಸತ್ಯಾಸತ್ಯತೆ ಸಹ ಗೊತ್ತಾಗುತ್ತಿರಲಿಲ್ಲ. ರಂಜನೆಯೇ ಪ್ರಧಾನ ಅಂಶ. ಅವ ಹೇಳತಿದ್ದ ಒಂದು ಕತಿ ಹಿಂಗ್ ಇತ್ತು----
ಅವನ ಕ್ಲಾಸಿನ್ಯಾಗ "ಗುಡಿ ಅಚ್ಚಿ" ಎಂಬಾವ ಶಾಲಿಗೆಇನಸ್ಪೆಕ್ಟರ್ ಬಂದಾಗ ಹೇಳೂ ಉತ್ತರ. ಇನಸ್ಪೆಕ್ಟರ್ರು ಗಂಗಾನದಿ ಎಲ್ಲಿ
ಹುಟ್ಟೇದ ಅಂತ ಕೇಳಿದ್ರ ಇವ ದುರ್ಗದ ಬೈಲಿನ್ಯಾಗ ಹುಟ್ಟಿ ಗವಳಿಗಲ್ಲಿಯೊಳಗ ಹರದದ ಅಂತ ಉತ್ತರ ಕೊಟ್ಟಿದ್ದಂತ.
ಇಂಗ್ಲೀಷ ಮಟ್ಟ ಪರೀಕ್ಷಿಸಲು ಇನಸ್ಪೆಕ್ಟರ್ರು "elephant is the beast animal" ಅಂದ್ರ ಗುಡಿ ಅಚ್ಚಿ ಓದಿದ್ದು
"elephant is the best animal" ಅಂತ. ಹಣಮುಕಾಕಾ ಹಾವಭಾವದಿಂದ ಈ ಕತಿ ಹೇಳೂದು ಕೇಳೋದ ಒಂದು ಸೊಗಸು. ಅವಗಿದ್ದ ಉಮೇದು, ಹುಕಿ ನಮಗ ಅವ ಹುರಿದುಂಬಿಸುತ್ತಿದ್ದ ರೀತಿ ಅವನನ್ನು ಅಪರೂಪಗೊಳಿಸುತ್ತಿತ್ತು.ನಮ್ಮ
ಕ್ರಿಕೆಟ್ ಟೀಮಿಗೆ IMPERIAL ಆನ್ನೊ ಹೆಸರು ಕೊಟ್ಟಿದ್ದ. ನಮಗೆಲ್ಲ ಲೆಕ್ಕ ಹಾಕಿಕೊಡುತ್ತಿದ್ದ ತಪ್ಪಿದರೆ ಬೈಗುಳ, ಕೀಟಲೆ
ಎದುರಿಸಬೇಕಾಗುತ್ತಿತ್ತು.ಹಾಡು ಅದರಲ್ಲೂ ಹಳೇ ಮರಾಠಿ ಹಾಡುಗಳು ಅವನಿಗೆ ಅಚ್ಚುಮೆಚ್ಚು.

ಅವನ ವೈಯುಕ್ತಿಕ ಬದುಕು ಸ್ವಲ್ಪ ವಿಚಿತ್ರವೂ ವಿಶಿಷ್ಟವೂ ಇತ್ತು. ಮೊದಲ ಹೆಂಡತಿ
ಬೇಗ ತೀರಿಕೊಂಡಿದ್ದಳು. ವಯಸ್ಸಾದ ಮೇಲೆ ಎರಡನೇ ಮದುವೆ ಮಾಡಿಕೊಂಡಿದ್ದ. ಎರಡನೆ ಹೆಂಡತಿಯಿಂದ ಎರಡು ಗಂಡು
ಪಡೆದ. ಅವನ ಗುಣಾವಗುಣ ತಿಳಿಯೋ ವಯಸ್ಸು ನಮ್ಮದಾಗಿರಲಿಲ್ಲ. ಆದರೆ ದೊಡ್ಡವರಾದಂತೆ ಅವನ ಬಗ್ಗೆ ಅವನ ವ್ಯಕ್ತಿತ್ವದ ಬಗ್ಗೆ ಕೆಲ ಸಂಗತಿಗಳು ಗೊತ್ತಾದವು, ಬದುಕು ಹೀಗೆ ಅಲ್ಲವೆ ಒಬ್ಬ ವ್ಯಕ್ತಿ ಬಗ್ಗೆ ಗೊತ್ತಾಗೊವರೆಗೆ ಅದು ಸುಂದರ ಅನಿಸುತ್ತದೆ. ವ್ಯಕ್ತಿಯ
ಬಗ್ಗೆ ನಮಗೆ ಗೊತ್ತಿದ್ದ ಸಂಗತಿಗಳು ನಾವು ದೊಡ್ಡವರಾದಂತೆ ಬದಲಾಗುತ್ತ ಹೋಗುತ್ತವೆ. ಹಿಂದೆ ಕುತೂಹಲ ಹುಟ್ಟಿಸುತ್ತಿದ್ದ ಹಣಮುಕಾಕಾನ ನಡಾವಳಿಗಳು ಸತ್ಯ ಗೊತ್ತಾಗುತ್ತಿದ್ದಂತೆ ಸ್ವಲ್ಪ ಜುಗುಪ್ಸೆ ತಂದವು. ಆದರೆ ಹಣಮುಕಾಕಾ ಹೆಂಗರಳಿನ ಮನುಷ್ಯ. ನನ್ನವ್ವ ಹೇಳುತ್ತಿದ್ದಳು ನಾ ಹುಟ್ಟುವ ಮೊದಲು ಅವಳಿಗೆ ಟಿಬಿ ಬಂದಿತ್ತು .ಎಲ್ಲ ಮುಗೀತು ಅಂತ ತಿಳಕೊಂಡಿದ್ರು. ಹಣಮುಕಾಕಾ ಮಾತ್ರ ರಾತ್ರಿಯಿಡೀ ನನ್ನವ್ವನ ಬಳಿಕೂತು ಮುಳುಮುಳು ಅಳುತ್ತಿದ್ದನಂತೆ. ಸಂಬಂಧದಲ್ಲಿ ಹಣಮುಕಾಕಾ ನನ್ನವ್ವನಿಗೆ ಸೋದರಮಾವ. ಅಂತಃಕರಣಿ ಹಣಮುಕಾಕಾ ಯಾರದೇ ನೋವಿರಲಿ ಮಿಡಿಯುತ್ತಿದ್ದ. ವಿಧಿ ಅವನಿಗೂ ನೋವು ತಂತು. ಅದು ಅನ್ನನಾಳದ ಕ್ಯಾನ್ಸರ್ ರೂಪದಲ್ಲಿ ಬಂತು.

ಅದಿನ್ನೂ ೧೯೭೬--೭೭ರ ದಿನಗಳು. ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸುರು ಆಗಿರಲಿಲ್ಲ.
ರೋಗ ಬಂದಿತ್ತು ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿಸೇರಿದ್ದ.ರೋಗ ತುರೀಯಾವಸ್ಥೆ ತಲುಪಿದಾಗ ಹುಬ್ಬಳ್ಳಿಗೆ ವಾಪಸ್ಸಾದ.
ಸ್ಫುರದ್ರೂಪಿ ಹಣಮುಕಾಕಾ ಒಣಗಿದ ಕೋಲಿನಂತಾಗಿದ್ದ. ರೇಡಿಯೇಶನ್ ನಿಂದ ಮೈ ಬಣ್ಣ ಕಪ್ಪಾಗಿತ್ತು.ನೋವು ಅಸಾಧ್ಯ ನೋವಿನಿಂದ ಅವ ಬಳಲುತ್ತಿದ್ದ ತನ್ನ ನೋವು ಆಗಾಗ ಅವ ಹೇಳಿಕೊಳ್ಳುತ್ತಿದ್ದ..." ಕಬ್ಬಿಣ ಕಡ್ಡಿ ಕಸಬರಿ ಫರಸಿ ಕಲ್ಲಿಗೆ ತಿಕ್ಕಿದ್ರ
ಎಂಥಾ ಅವಾಜಾಗ್ತದ ನೋಡು ಅದರ ದುಪ್ಪಟ್ಟು ಸಂಕಟ ನಂಗಾಗ್ತದ...." ನೋವಿನಿಂದ ಒದ್ದಾಡಿ ಒದ್ದಾಡಿ ಅಂತೂ ೧೯೭೮ ದಾಗ
ಅವ ತೀರಿಕೊಂಡ.
ನನ್ನ ಬಾಲ್ಯದ ದಿನಗಳ ಒಂದು ಮಧುರ ಸ್ಮೃತಿ ಹಣಮುಕಾಕಾ ದಡ ಬೇಗ
ಬಂತು ಅಂತ ದೋಣಿಯಿಂದ ಬೇಗನೆ ಇಳಿದು ಹೋದ ಆದರೆ ನೆನಪಿನ ದೋಣಿಯಲ್ಲಿ ಅವನ ಜಾಗೆ ಹಾಗೆಯೇ ಉಳಿದಿದೆ..
ಯಾರಿಗೂ ತುಂಬಲಾಗಿಲ್ಲ.

Wednesday, November 25, 2009

ನೆನಪಿನ ದೋಣಿಯಲಿ ನಾನು...

ನೆನಪು ಯಾರಿಗೆ ಬೇಡ ಹೇಳಿ ನೆನಪು ಕಹಿ ಇರಲಿ ಸಿಹಿ ಇರಲಿ ನೆನಪುಗಳಿಲ್ಲದೇ ಇರಲು ಸಾಧ್ಯವಿಲ್ಲ.
ನೆನಪಿನ ಬುತ್ತಿಯ ಗಂಟು ಬಿಚ್ಚಿದ್ದೇನೆ ಸವಿಯನ್ನು ನಿಮಗೂ ಉಣಬಡಿಸುವ ಆಸೆ ಇದೆ
ಬುತ್ತಿ ರುಚಿಯಾಗಿದೆ ತಯಾರಿಸಿದವರು ಬಹಳಷ್ಟು ಜನ ನನ್ನ ಜೊತೆ ದೋಣಿ ಏರಿಲ್ಲ ಅವರ ದಡ ಸ್ವಲ್ಪ ಲಗೂನೆ ಬಂದಿದೆ
ಇಳಿದುಕೊಂಡಿದ್ದಾರೆ....!
ಆದರೂ ಅವರೊಡನೆ ಕಳೆದ ಸುಖ ದುಃಖದ ಕ್ಷಣ ನಿಮ್ಮೊಂದಿಗೆ ಹಂಚಿಕೊಳ್ಳುವವನಿದ್ದೇನೆ.
ಬುತ್ತಿರುಚಿಯಾಗಿದ್ದರೆ ಮನದಣಿಯೆ ಸವಿಯಿರಿ ಕಹಿ ಅನಿಸಿದಾಗೆಲ್ಲ ಉಗಿಯಿರಿ..!
ಬರ್ರಿ ದೋಣಿ ಏರೋಣ....

. ಸುರು ಮಾಡೋದು ಅವಳಿಂದಲೇ ಅದು ನ್ಯಾಯವೂ ಹೌದು ಅವಳಿಲ್ಲದಿದ್ದರೆ ನಾ ಎಲ್ಲಿ ಇರತಿದ್ದೆ..
ಅವ್ವ ಈಗಿಲ್ಲ ೧೩ ವರ್ಷ ಆದವು ಫೋಟೋದಲ್ಲಿ ಕೈದ ಆಗಿ, ನೆನಪು ಬರ್ತದ ಕಣ್ಣೂ ಹನಿಗೂಡ್ತದ
ಏನು ಮಾಡಲಿ... ಅವಳಬಗ್ಗೆ ಹೇಳಲು ಹೊರಟಿರುವೆ ಕಷ್ಟ ಅದ ಆದ್ರೂ ಕವಿತಾದಾಗ ಹಿಡಿದಿಡಲಿಕ್ಕೆ ಪ್ರಯತ್ನ ಮಾಡೇನಿ....

ನನ್ನವ್ವ
------
ಹಾಳೆಗಳ ಮೇಲೆ ಭಾವ ಮೂಡಿದರೆ
ಬರೆದೇನು ಕವಿತೆ..
ಹಿಡಿದಿಡಬಹುದಾದರೆ ಕೆತ್ತನೆಯಲಿ
ಕೆತ್ತೇನು ಅವಳ...
ಅವ್ವ ಅಮೂರ್ತ ರೂಪಿ
ಶಿಲ್ಪಿ ಕವಿಗಳಿಗೆ ನಿಲುಕದ ಕನಸವಳು....!

ಜಗದಲ್ಲಿ ವಿರಳವಾದ ಅಂತಃಕರಣವ
ಜೀವನವಿಡೀ ಉಣ್ಣಿಸಿದಳು
ತಾ ಬೆಂದರೂ ಶಾಖ ಬೇರೆಯವರಿಗೆ
ತಟ್ಟಗೊಡದವಳು...
ನಾನೇ ಹಲವುಬಾರಿ ಕೊಳ್ಳಿ ಇಟ್ಟರೂ
ಸ್ಥಿತಪ್ರಜ್ನೆ ಅವಳು...!

ಅದೇ ಅರಳಿದ ಹೂ ಮೇಲಿನ ಇಬ್ಬನಿ ಹನಿಯವಳು
ರಾತ್ರಿ ಸುರಿಯುವ ತಂಗಾಳಿಯಂತೆ
ದಿಗಿಲಾಗಿ ನಾ ಅತ್ತಾಗ ಕಣ್ಣೀರಂತೆ ಸುಂದರಿಅವಳು
ಹೀಗಿದ್ದಳು ನನ್ನವ್ವ
ಸುಂದರ ಕನಸಂತೆ...
ನೋಡಿದರೆ ಕೈ ಮುಗಿಯುವ ಉತ್ಕಟತೆಯಂತೆ...!